Saturday, 3 October 2026

ಸ್ವಾತಂತ್ರ್ಯ - Freedom

ಸ್ವಾತಂತ್ರ್ಯ 


ಆ ಹಕ್ಕಿಗೆ ಸ್ವಾತಂತ್ರ್ಯ ಅಂದರೆ ಏನೆಂದು ಗೊತ್ತಿರಲಿಲ್ಲ. 


ಅದರ ಪಂಜರ ವಿಶಾಲವಾಗಿತ್ತು. ಊಟ ತಿಂಡಿಗೆ ಕೊರತೆ ಇರಲಿಲ್ಲ. ಆಟ ಪಾಠ ಉದ್ಯೋಗ ಯಾವುದಕ್ಕೂ ಕೊರತೆ ಇರಲಿಲ್ಲ.

ಅದರ ಪಂಜರದ ಬಾಗಿಲು ತೆಗೆದೇ ಇತ್ತು. ಅದು ಸಣ್ಣ ಪುಟ್ಟ ಹಾರಾಟ ಮಾಡಿ ಮತ್ತೆ ಪಂಜರ ಸೇರುತ್ತಿತ್ತು .


ಹಕ್ಕಿ  ಖುಷಿಯಾಗಿತ್ತು. ಆದರೂ ಅದರ ಒಳಗೆ ಭಯಂಕರವಾದ ಒಂದು ಕೊರತೆ ಅಥವಾ ದುಃಖ ವನ್ನು ಹೋಲುವ, ಹೇಳಲಸಾಧ್ಯವಾದ ಒಂದು ಭಾವನೆ ಬೆಳೆಯತೊಡಗಿತು.


ತುಂಬಾ ವರ್ಷ ಹೀಗೆ ಕಳೆದುಹೋಯಿತು .  ಹೊರಗಿನ ಜಗತ್ತು ಬದಲಾಗುತ್ತಿದ್ದ ಹಾಗೆ ಕೆಲವು ಅಪರಿಚಿತ ಸ್ವತಂತ್ರ ಹಕ್ಕಿಗಳು ಇದರ ಗೂಡಿನ ಹೊರಗೆ ಹಾರಾಡತೊಡಗಿದವು. ಅವರ ಕಲರವಗಳು ಇದರ ಕಿವಿಗೆ ಬಿತ್ತು .  ಅದು ಈಗ ಮೊದಲಿಗಿಂತ ಹೆಚ್ಚಾಗಿ ಆಸಕ್ತಿಯಿಂದ ಸ್ವತಂತ್ರ ಹಕ್ಕಿಗಳ ಮಾತುಕತೆಗಳನ್ನು ಆಲಿಸತೊಡಗಿತು.  


ಅದಕ್ಕೆ ನಿಧಾನವಾಗಿ ಸ್ವತಂತ್ರ ಹಾರಾಟದ ಅನಿಸಿಕೆಯ ಅರಿವಾಗತೊಡಗಿತು . ಆದು ಪ್ರತಿದಿನ ತನ್ನ ರೆಕ್ಕೆ ಬಲಗೊಡಿಸತೊಡಗಿತು.


ಇಂದು ಆ ಹಕ್ಕಿ ಮನೆ ಎಂದು ಅಂದುಕೊಂಡ ಆ ಪಂಜರ ಬಿಟ್ಟು ಹೊರಟಿದೆ. ಅದರ ರೆಕ್ಕೆಯ ಬಲದ ನಂಬಿಕೆಯ ಮೇಲೆ.

ಹೊಸತನದ ಹುರುಪಿದೆ. ಅನಂತದಲ್ಲಿ ಭರವಸೆಯಿದೆ .


ಶುಭವಾಗಲಿ ಹಕ್ಕಿಗೆ.



Tuesday, 12 July 2022

ಮನಶಾಂತಿ

 ಚಿರಶಾಂತಿ ಬಪ್ಪಮೊದಲು 

ಮನಶಾಂತಿ ಬಪ್ಪುದೇ ?

Sunday, 10 July 2022

ಚುಟುಕುಗಾತಿ

 ಸುಮ್ನೆ ಹಾಗೆ ಚುಟುಕುಗಾತಿ ನಾನು।

ಲೇಖನದ ಆಳ ಅತಿ ಅಸಾಧ್ಯ ಕಾನು ।

(ಕಾನು  - ಕಾನನ , ಅರಣ್ಯ)


ಸ್ಫೂರ್ತಿ : ಜ್ಯೋತಿ ಎಚ್. ಆರ್.  

ಮನದಿ ಬಿತ್ತಿದ ಬೀಜ

ಮನದಿ ಬಿತ್ತಿದ ಬೀಜ 
ಕೆಲವು ಮರವಾದವು 
ಹಲವು ತೆರವಾದವು ।

ಸರಿದಂತೆ ಕಾಲಾ 
ಮರವೊಣಗಿ ಬೀಳಾ ।
ಮತ್ತೆ ಬಿತ್ತುತಿರು ಬೀಜಾ 
ಅಂತೇ ಜೀವನದ ಮಜಾ ।

Tuesday, 26 October 2021

ಅಪ್ಪಾ..ನಿನ್ನ ನೆನಪು

 ಅಪ್ಪಾ..

ನಿನ್ನೆನಪಿನ ಬತ್ತಳಿಕೆಯ ಬಾಣಗಳು 

ಸುತ್ತುವರಿದಿವೆ ನನ್ನೆದೆಯ ಗೂಡಾ.


ಹಲವು ಸವಿಯ ಮೆಲುಕು ..

ಕೆಲವು ನೋವ ಮಿಡಿಪು.


ನೀನಿನ್ನು ನೆನಪು ಎಂಬ ವಾಸ್ತವ..

ಮರಳಿ ಮರಳಿ ಅನಿಸುತಿದೆ..ಇದು ದಿಟವಾ?


ಅಪ್ಪಾ..

Wednesday, 22 September 2021

ರಾತ್ರಿಯಲಿ ಬೆಳದಿಂಗಳಾ

ರಾತ್ರಿಯಲಿ ಬೆಳದಿಂಗಳಾ ।
ಕರೆಯುತಲಿ ಮನೆಯಂಗಳಾ ।
ಸವಿಯುತಲಿ ಮನದಂಗಳಾ ।
ಮರೆಯುತಲಿ ಮನ ವಾಂಛಲಾ ।
ಮೆರೆಯುತಲಿ ಸಿಹಿ ಹಂಬಲಾ ।

Sunday, 14 March 2021

ಅವಸsssರ ಮಾಡಬ್ಯಾಡಾ

 ಗಡಿಬಿsssಡಿ  ಗುಂಡಪ್ಪಾ 

ಅವಸsssರ ಮಾಡಬ್ಯಾಡಾ। 


ಒಂದಾssದ ಮೇಲೊಂದು 

ಕೆಲಸಾssನ ಮಾಡ್ಕೊಂಡು ।


ಗಾಡೀssನ ಹೊಡ್ಕೊಂಡು 

ಒಮ್ಮೊಮ್ಮೆ ತಳ್ಕೊಂಡು ।


ಗಡಿಬಿsssಡಿ  ಗುಂಡಪ್ಪಾ 

ಅವಸsssರ ಮಾಡಬ್ಯಾಡಾ। 


ss  --> ರಾಗ ಎಳೆಯುವುದು